ಪ್ಲಿಯೊಸೀನ್ ಸ್ತೋಮ
	 ಚತುರ್ಥ ಕಾಲದ (ಸೀನೋಜೋಯಿಕ್ ಕಲ್ಪದ) ಐದು ಪ್ರಧಾನ ವಿಭಾಗಗಳ ಪೈಕಿ ಅತ್ಯಂತ ತರುಣವಾದ ಕಲ್ಪ. ಪ್ಲಿಯೊಸೀನ್ ಸ್ತೋಮವನ್ನು ಚಾರಲ್ಸ್ ಲಯಲ್ 1833ರಲ್ಲಿ ವ್ಯಾಖ್ಯಿಸಿದ. ಪ್ಲಿಯೊಸೀನ್ ಎಂದರೆ ಮಿಯೊಸೀನ್ ಕಾಲಕ್ಕಿಂತ ಈ ಕಾಲದಲ್ಲಿ ಪ್ರಾಣಿವರ್ಗ ಹೆಚ್ಚು ಗಾತ್ರದಲ್ಲಿ ಈಗ ಜೀವಿಸುತ್ತಿರುವ ಪ್ರಕಾರಗಳಿಂದ ಪ್ರತಿನಿಧಿಸಲ್ಪಟ್ಟಿದೆ ಎಂದು ಅರ್ಥ. ಯೂರೋಪ್ ಖಂಡದಲ್ಲಿ ಈ ಯುಗದ ಸಸ್ಯವರ್ಗ ಮಿಯೊಸೀನ್ ಕಾಲದ ಉಷ್ಣವಲಯದ ಸಸ್ಯವರ್ಗ ಮತ್ತು ಈಗಿನ ಸಮಶೀತೋಷ್ಣವಲಯದ ಸಸ್ಯವರ್ಗಗಳ ಮಧ್ಯಾವಸ್ಥೆಯದಾಗಿತ್ತು. ಆಂಗ್ಲೊ-ಫ್ರಾಂಕ್-ಬೆಲ್ಜಿಯನ್ ನಿಕ್ಷೇಪಪ್ರದೇಶದಿಂದ ಹಿಂಜರಿದಿದ್ದ ಸಮುದ್ರ ಈ ಕಾಲದಲ್ಲಿ ಹಿಂತಿರುಗಿ ಇಂಗ್ಲೆಂಡಿನ ದಕ್ಷಿಣ ಮತ್ತು ಆಗ್ನೇಯ ಪ್ರದೇಶಗಳನ್ನು ಆಕ್ರಮಿಸಿಕೊಂಡು ಹಾಲೆಂಡ್ ಮತ್ತು ಬೆಲ್ಜಿಯಮುಗಳ ಮೇಲೆ ಪ್ರಸರಿಸಿ, ಫ್ರಾನ್ಸಿನ ಉತ್ತರಭಾಗದ ಸ್ವಲ್ಪಪ್ರದೇಶಕ್ಕೂ ವಿಸ್ತರಿಸಿತು. ಮೆಡಿಟರೇನಿಯನ್ ಸಮುದ್ರ ಪಶ್ಚಿಮಕ್ಕೆ ಇಟಲಿಯ ಹೆಚ್ಚಿನ ಭಾಗವನ್ನು ಆಕ್ರಮಿಸಿಕೊಂಡು ರಿವೆರ ಮತ್ತು ರೊಹೀನ್ ಕಣಿವೆಗಳಿಗೂ ನುಗ್ಗಿತು. ಇವಲ್ಲದೆ ಕೆಲವು ಸ್ಥಳಗಳಲ್ಲಿ ಸರೋವರ ಮತ್ತು ನದೀ ನಿಕ್ಷೇಪಗಳೂ ರೂಪುಗೊಂಡಿವೆ. ಈ ನಿಕ್ಷೇಪಗಳಲ್ಲಿ ಸ್ತನಿಗಳ ಮತ್ತು ಭೂಸಸ್ಯಗಳ ಅವಶೇಷಗಳೂ ಸಿಕ್ಕಿವೆ. ಸಾಮಾನ್ಯವಾಗಿ ಪ್ಲಿಯೊಸೀನ್ ಸ್ತೋಮವನ್ನು ಪ್ಲೈಸಾನ್ಸಿಯನ್, ಆಸ್ಟಿಯನ್ ಮತ್ತು ಸಿಸಿಲಿಯನ್ ಎಂಬ ಮೂರು ಶಿಲಾಭಾಗಗಳಾಗಿ ವಿಭಜಿಸಲಾಗಿದೆ. 

	ಇಟಲಿಯಲ್ಲಿ ಪ್ಲಿಯೊಸೀನ್ ಸ್ತೋಮ ಸಂಪೂರ್ಣವಾಗಿ ಸಾಗರನಿಕ್ಷೇಪಗಳಿಂದ ಕೂಡಿರುವುದರಿಂದಲೂ ಅತ್ಯುತ್ತಮವಾಗಿ ರೂಪುಗೊಂಡಿರುವುದರಿಂದಲೂ ಈ ಸ್ತೋಮವನ್ನು ಮಾದರಿಯಾಗಿ ಇಟ್ಟುಕೊಳ್ಳಲಾಗಿದೆ.  ಇದರ ಅತ್ಯಂತ ಕೆಳಭಾಗ ಮರಳು ಮತ್ತು ಜೇಡು ಮಿಶ್ರ ಮಾರಲ್ ಶಿಲೆಗಳು ಮತ್ತು ಪೆಂಟೆ ಶಿಲೆಗಳಿಂದ ಕೂಡಿದೆ. ಇವುಗಳ ಮಧ್ಯೆ  ಜಿಪ್ಸಮ್ ಸುಣ್ಣಶಿಲೆ ಡಾಲೊಮೈಟ್ ಶಿಲೆಗಳ ಮತ್ತು ಲಿಗ್ನೈಟ್ ಕಲ್ಲಿದ್ದಲುಗಳ ಪದರಗಳಿವೆ. ಮೊದಲನೆಯವನ್ನು ಮೆಸ್ಸಿನಿಯನ್ ಶಿಲಾವರ್ಗವೆಂದೂ ಎರಡನೆಯವನ್ನು ಕಾಂಗಯ ಶಿಲಾವರ್ಗವೆಂದೂ ಕರೆಯಲಾಗಿದೆ. ನಿಕ್ಷೇಪ ಪ್ರದೇಶ ಸಮುದ್ರದಿಂದ ಪದೇ ಪದೇ ಬೇರ್ಪಟ್ಟು ಪುನಸ್ಸಂಪರ್ಕಹೊಂದಿರುವುದನ್ನು ಈ ಶಿಲಾರಾಶಿ ಸೂಚಿಸುತ್ತದೆ. ಈ ಶಿಲೆಗಳಲ್ಲಿ ಪೆಕ್ಟೆನ್, ಟರಿಟೆಲ್ಲ, ವೀನಸ್ ಸೆರಿತಿಯಮುಗಳೂ  ವಾಮ್ ಗಿಡಗಳು ಅವಶೇಷಗಳೂ ಇವೆ. ಇವುಗಳಿಗಿಂತ ಸ್ವಲ್ಪ ಕಿರಿದಾದ ನಿಕ್ಷೇಪಗಳನ್ನು ಪ್ಲೈಸಾನ್ಸಿಯನ್ ಶಿಲಾಶ್ರೇಣಿ ಎಂದು ಕರೆಯಲಾಗಿದೆ. ಈ ನಿಕ್ಷೇಪಗಳು ಮಾರಲ್ ಮತ್ತು ಜೇಡುಗಳಿಂದ ಆಗಿದೆ. ಟಸ್ಕನಿಯಲ್ಲಿರುವ ಈ ಕಾಲದ ನಿಕ್ಷೇಪಗಳಲ್ಲಿ ಸ್ತನಿಗಳ ಅವಶೇಷ ಸಂಗ್ರಹ ಉಂಟು. ಅವುಗಳಲ್ಲಿ ಹಿಪ್ಟೇರಿಯನ್ ಕುದುರೆ, ಸುಸ್ ಎಂಬ ಹಂದಿ, ಸಾರಂಗ, ತಪೀರ್ ಮತ್ತು ಸಮ್ನೊಪಿತಿಕಸ್ ಕಪಿ ಮುಂತಾದವು ಗಮನಿಸಲು ಯೋಗ್ಯವಾದವಾಗಿವೆ. ಅತೆನ್ಸ್ ಮತ್ತು ಮರತಾನ್‍ಗಳಿಗೆ ಮಧ್ಯೆ ಇರುವ ಪ್ರದೇಶದಲ್ಲೇ ಕೆಂಪು ಜೇಡು ಮತ್ತು ನೊರಜು ನಿಕ್ಷೇಪಗಳು ಪುನರಾವೃತ್ತಿಗೊಂಡಿವೆ. ಇವುಗಳಿಗೆ ಪಿಕರ್ಮಿ ಶಿಲೆಗಳೆಂದು ಹೆಸರು. ಈ ಶಿಲೆಗಳಲ್ಲಿ ಸ್ತನಿಗಳ ಅವಶೇಷಗಳ ಅಪೂರ್ವ ಸಂಗ್ರಹ ಉಂಟು. ಅವೆಲ್ಲ ದೈತ್ಯಾಕಾರಿಗಳೇ, ಚಿಕ್ಕವು ಬಲು ಅಪರೂಪ, ಅವುಗಳಲ್ಲಿ ಸಾಕಷ್ಟು ಸಂಯೋಜಿತ ಜೀವಿಗಳೂ ಇವೆ. ಈ ಸಂಗ್ರಹದಲ್ಲಿ ಮುಖ್ಯವಾದವೆಂದರೆ ಮೀಸೊಪಿತಿಕಸ್ (ಕಪಿ)  ಫೆಲಿಸ್‍ನ ಅನೇಕ ಬಗೆಗಳು ಮತ್ತು ಇತರ ಮಾಂಸಾಹಾರಿಗಳು, ಮ್ಯಾಸ್ಟಡಾನ್ ಮತ್ತು ಡೈನೋತೀರಿಯಮ್ (ಆನೆಗಳು) ಖಡ್ಗಮೃಗ, ಹಿಪ್ಟೇರಿಯನ್ (ಕುದುರೆ), ಸುಸ್ (ಹಂದಿ) ಮತ್ತು ಸಾರಂಗಗಳು. ಈ ಸ್ತನಿಗಳ ಆಧಾರದ ಮೇಲೆ ವಿಕರ್ಮಿಶಿಲೆಗಳು ಮಿಯೊಸೀನ್ ಅಂತ್ಯಕಾಲಕ್ಕೆ ಸೇರಿದವೆಂದು ನಿರ್ಧರಿಸಲಾಗಿದೆ. ಆದರೆ ಇವು ಪ್ಲಿಯೊಸೀನ್ ಆದಿಕಾಲದ ಮೃದ್ವಂಗಿಗಳ ಅವಶೇಷಗಳನ್ನೊಳಗೊಂಡ ಸಾಗರ ನಿಕ್ಷೇಪಗಳ ಮೇಲೆ ಸಂಚಯಗೊಂಡಿದೆ. ಆದ್ದರಿಂದ ಇವನ್ನು ಪ್ಲಿಯೊಸೀನ್ ಸ್ತೋಮದ ಕೆಳಭಾಗಕ್ಕೆ ಸೇರಿಸಲಾಗಿದೆ.

	ಮಧ್ಯಭಾಗ ನೀಲಿ ಮಾರಲ್ ಶಿಲೆಗಳು ಮತ್ತು ಆಳವಿಲ್ಲದ ಕಡೆ ಸಂಚಯಗೊಂಡ ಹಳದಿ ಮರಳುಗಳಿಂದ ಕೂಡಿದ ಈ ನಿಕ್ಷೇಪಗಳಿಗೆ ಆಸ್ಟಿಯನ್ ಶ್ರೇಣಿ ಎಂದು ಹೆಸರು. ಇವುಗಳಲ್ಲಿ ಸಿಪ್ರಿನ ಐಲ್ಯಾಂಡಿಕ, ಡೆಂಟಲಿಯಮ್ ಮತ್ತು ನಾಟಕಗಳ ಪ್ರಕಾರಗಳು ಇವೆ. ಈ ಶಿಲೆಗಳು ನಿಕ್ಷೇಪಗೊಳ್ಳುತ್ತಿದ್ದಾಗಲೇ ವೆಸುವಿಯಸ್ ಮತ್ತು ಎಟ್ನ ಜ್ವಾಲಮುಖಿಗಳು ಸಮುದ್ರದಡಿಯಲ್ಲಿಯೇ ಶಿಲಾರಸವನ್ನು ಉಗುಳಲಾರಂಭಿಸಿದುವು. ಪ್ಲಿಯೊಸೀನ್ ಸ್ತೋಮದ ಮೇಲ್ಭಾಗ ಸಿಸಿಲಿ ದ್ವೀಪದಲ್ಲಿ ಉತ್ತಮವಾಗಿ ರೂಪುಗೊಂಡು ಸುಮಾರು 610 ಮೀಟರುಗಳಷ್ಟು ದಪ್ಪವಿದೆ. ಆದ್ದರಿಂದಲೇ ಇದನ್ನು ಸಿಸಿಲಿಯನ್ ಶಿಲಾಶ್ರೇಣಿ ಎಂದು ಕರೆದಿರುವುದಾಗಿದೆ. ಇಟಲಿಯಲ್ಲಿ ಪ್ಲಿಯೊಸೀನ್ ಮೇಲ್ಭಾಗದ ಸಾಗರ ನಿಕ್ಷೇಪಗಳು ಅಲ್ಲಲ್ಲಿ ವಿರಳವಾಗಿ ಸಂಚಯಗೊಂಡಿವೆ. ಇವನ್ನು ಕ್ಯಾಲಬ್ರೇಯನ್ ಶಿಲೆಗಳೆಂದು ಕರೆಯಲಾಗಿದೆ. ಆದರೆ ಸರೋವರ ಮತ್ತು ನದೀ ನಿಕ್ಷೇಪಗಳು ಹೆಚ್ಚಾಗಿವೆ. ಈ ನಿಕ್ಷೇಪಗಳಲ್ಲಿ ಭೂಸಸ್ಯಗಳು, ಕುದುರೆ, ಆನೆ, ಹಯ್ನ ಕರಡಿ, ಒಂಟೆ, ಹಿಪ್ಪೊಪೊಟಾಮಸ್ (ನೀರ್ಗುದುರೆ) ಮೊದಲಾದ ಪ್ರಾಣಿಗಳ ಅವಶೇಷಗಳಿವೆ. ಈ ನಿಕ್ಷೇಪಗಳಿಗೆ ಅರ್ನೂಸಿಯನ್ ಅಥವಾ ವಿಲ್ಲಪ್ರಾಂಕಿಯನ್ ಶ್ರೇಣಿಗಳೆಂದು ಹೆಸರು.

	ಇಂಗ್ಲೆಂಡಿನಲ್ಲಿ ಪ್ಲಿಯೊಸೀನ್ ಸ್ತೋಮ ಪೂರ್ವ ಆಂಗ್ಲಿಕದಲ್ಲಿ ಚೆನ್ನಾಗಿ ರೂಪುಗೊಂಡಿದೆ. ಇಲ್ಲಿಯ ಅತ್ಯಂತ ಕೆಳಶಿಲೆಗಳೆಂದರೆ ನಾನಾ ಶಿಲೆಗಳ ಶಿಥಿಲೀಕರಣದಿಂದ ಬಂದ ಗುಂಡುಗಳಿಂದ ಆದ ಪೆಂಟೆಶಿಲೆ ಮತ್ತು ಕಬ್ಬಿಣಾಂಶದಿಂದ ಕೂಡಿದ ಮರಳು ಶಿಲೆಗಳು. ಪೆಂಟೆಶಿಲೆಯ ಗುಂಡುಗಳ ಮಧ್ಯೆ ಮೃದ್ವಂಗಿಗಳ ಚಿಪ್ಪುಗಳಿವೆ. ಪೆಂಟೆ ಶಿಲೆಯಲ್ಲಿ ಭೂವಾಸಿಗಳ ಮತ್ತು ಸಾಗರವಾಸಿಗಳ ಎಲುಬುಗಳು ಮತ್ತು ಹಲ್ಲುಗಳು ಇವೆ. ಈ ಅವಶೇಷಗಳು ಪ್ಲಿಯೊಸೀನ್ ಯುಗದ ಪೂರ್ವದ ನಾನಾಯುಗಗಳ ಶಿಲೆಗಳಿಂದ ಬಂದವು. ಇವುಗಳಿಗೆ ಬಾಕ್ಸ್‍ಸ್ಟೋನ್ಸ್ ಎಂದು ಹೆಸರು. ಇವುಗಳ ಮೇಲಿರುವ ಮರಳು ಶಿಲೆಗಳು ಜೀವ್ಯವಶೇಷರಹಿತವಾಗಿವೆ. ಆದರೆ ಲೆನ್‍ಹ್ಯಾಮ್ ಹತ್ತಿರ ಅರ್ಕ ಡೆಲುಮೈ ಲಕಾರ್ಡಿಯಮ್, ಪೇಪಿಲೋಸಮ್, ಕ್ಯಪುಲೇರಿಯ ಮುಂತಾದ ಅವಶೇಷಗಳನ್ನು ಹೊಂದಿವೆ. ಈ ಶಿಲೆಗಳು ಹಾಲೆಂಡ್ ಮತ್ತು ಬೆಲ್ಜಿಯಮ್ ಪ್ರದೇಶಗಳ ಡಿಯಸ್ಟಿಯನ್ ಶಿಲಾವಿಭಾಗಕ್ಕೆ ಸಮವೆನಿಸಿವೆ.

	ಮಧ್ಯಭಾಗ ಕರಲಿಯನ್ ಕ್ರ್ಯಾಗ್ ಮತ್ತು ಕೆಂಪು ಕ್ರ್ಯಾಗ್ ಸುಣ್ಣಮಿಶ್ರ ಮರಳುಗಳಿಂದ ಆಗಿದೆ. ಇವುಗಳಲ್ಲಿ ಬ್ರಿಯಜೋವ ಮತ್ತು ಮೃದ್ವಂಗಿಗಳ ಅವಶೇಷಗಳಿವೆ. ಅಲ್ವಿಯೊಲೇರಿಯ ಮತ್ತು ಪ್ಯಾಸಿಕ್ಯುಲೇರಿಯ ಜಾತಿಯ ಬ್ರಿಯೊಜೋವಗಳು ಈ ಶಿಲೆಗಳ ವಿಶಿಷ್ಟ ಮತ್ತು ವಿಶೇಷ ಅವಶೇಷಗಳು. ವಲ್ಯುಟ ಲ್ಯಾಂಬರ್ಟಿ, ಪೈರುಲ ರೆಟಿಕ್ಯುಲೇರಿಯ ಮತ್ತು ಕಾರ್ಡಿಟಸೆನಿಲಿಸ್‍ಗಳು ಮುಖ್ಯಮೃದ್ವಂಗಿಗಳು ಕರಲಿಯನ್ ಕ್ರ್ಯಾಗ್ ಮತ್ತು ಕೆಂಪು ಕ್ರ್ಯಾಗ್‍ಗಳ ಮಧ್ಯೆ ಸ್ಪಷ್ಟ ಭಿನ್ನತೆಯನ್ನು ವ್ಯಕ್ತಪಡಿಸುತ್ತವೆ. ಕೆಂಪು ಕ್ರ್ಯಾಗ್ ಕೆಂಪು ಅಥವಾ ಕಂದು ಬಣ್ಣದ ಕಬ್ಬಿಣಾಂಶದ ಮರಳುಗಳಿಂದ ಆಗಿದೆ. ಇವನ್ನು ವಾಲ್ಟೋನಿಯನ್, ನ್ಯೂಬ್ರೌನಿಯನ್ ಮತ್ತು ಬಟ್ಲೆಯನ್ ಎಂಬ ಮೂರು ಭಾಗಗಳಾಗಿ ವಿಭಜಿಸಲಾಗಿದೆ.  ವಾಲ್ಟೋನಿಯನ್ನಿನಲ್ಲಿ ದಕ್ಷಿಣ ಪ್ರಾಂತದ ಜೀವ್ಯವಶೇಷಗಳೂ ನ್ಯೂಬ್ರೌನಿಯನ್ ಮತ್ತು ಬಟ್ಲೆಯನ್ನುಗಳಲ್ಲಿ ಉತ್ತರ ಪ್ರಾಂತದ ಜೀವ್ಯವಶೇಷಗಳೂ ಇವೆ. ಕರಲಿಯನ್ ಮತ್ತು ಕೆಂಪು ಕ್ಯಾಗ್‍ಗಳೆರಡರ ಎಲ್ಲ ಭಾಗಗಳೂ ಅವುಗಳಲ್ಲಿರುವ ಜೀವ್ಯವಶೇಷಗಳೂ ಹಾಲೆಂಡ್-ಬೆಲ್ಜಿಯಮ್ ಪ್ರದೇಶದಲ್ಲಿ ಪ್ರತಿನಿಧಿಸಲ್ಪಟ್ಟಿವೆ.
	ಪ್ಲಿಯೊಸೀನ್ ಮೇಲ್ಭಾಗ ಹಾಲೆಂಡ್-ಬೆಲ್ಜಿಯಮ್ ಪ್ರದೇಶದಲ್ಲಿ ರೂಪುಗೊಂಡಿಲ್ಲ. ಇಂಗ್ಲೆಂಡಿನಲ್ಲಿ ಈ ಭಾಗ ಸಾಗರ ನಿಕ್ಷೇಪ ಮತ್ತು ಸಾಗರ ಅಳಿವೆ ನಿಕ್ಷೇಪಗಳ ಪುನರಾವೃತ್ತಿಯಿಂದ ಕೂಡಿದೆ. ಈ ನಿಕ್ಷೇಪಗಳನ್ನು (ಆರೋಹಣ ಕ್ರಮದಲ್ಲಿ) ನಾರ್ವಿಕ್ ಕ್ಯಾಗ್, ಚಿಲ್ಲೆಸ್ ಫೋರ್ಡ್ ಪದರುಗಳು, ವೇಬಾರನ್ ಪದರುಗಳು ಮತ್ತು ಕ್ರೋಮರ್ ವನಪದರುಗಳೆಂಬ ನಾಲ್ಕು ಭಾಗಗಳಾಗಿ ವಿಭಜಿಸಲಾಗಿದೆ. ವಾಲ್ಟೋನಿಯನ್ ಭಾಗ ಮತ್ತು ಚಿಲ್ಲೆಸ್‍ಫೋರ್ಡ್ ಭಾಗಗಳು ಮರಳು, ನೊರಜು ಮತ್ತು ಜೇಡುಗಳಿಂದ ಕೂಡಿವೆ. ಅವುಗಳಲ್ಲಿ ಈಗ ಜೀವಿಸುತ್ತಿರುವ ಪ್ರಾಣಿಪ್ರಕಾರಗಳೇ ಹೆಚ್ಚಾಗಿವೆ. ಆದರೆ ಮೊದಲನೆಯದು ಸಾಗರ ನಿಕ್ಷೇಪ, ಎರಡನೆಯದು ಸಮುದ್ರ ಅಳಿವೆ ನಿಕ್ಷೇಪ, ವೇಬಾರನ್ ಸಹ ಸಾಗರ ನಿಕ್ಷೇಪ ಆದರೆ ಕ್ರೋಮರ್ ವನ ನಿಕ್ಷೇಪ ಸರೋವರ ನಿಕ್ಷೇಪಗಳು.
	
	ಉತ್ತರ ಅಮೆರಿಕ : ಕಾರ್ಡಿಲೆರಾನ್ ಪ್ರದೇಶದಲ್ಲಿ ಜ್ವಾಲಾಮುಖಿಗಳ ಕಾರ್ಯಾಚರಣೆ ಮಿಯೊಸೀನ್ ಕಾಲದಿಂದ ಪ್ಲೀಸ್ಟೊಸೀನ್ ಕಾಲದ ತನಕ ಮುಂದುವರಿಯಿತು. ಆದರೆ ಜ್ವಾಲಾಮುಖಿ ಶಿಲಾಪದರುಗಳ ಮಧ್ಯೆ ಜಲಜ ಶಿಲಾಪದರುಗಳ ಸಂಚಯನವೂ ಆಗಿದೆ. ರಾಕಿ ಪರ್ವತಗಳ ಪೂರ್ವಕ್ಕಿರುವ ವಿಶಾಲ ಮೈದಾನದಲ್ಲಿ ಮಿಯೊಸೀನ್ ನಿಕ್ಷೇಪಗಳ ಮೇಲೆ ಅದೇ ರೀತಿಯ ನಿಕ್ಷೇಪಗಳು ಮೇಲೆ ಅದೇ ರೀತಿಯ ನಿಕ್ಷೇಪಗಳು ಸಂಚಯನಗೊಂಡಿವೆ. ಆದರೆ ಇವು ಗಟ್ಟಿಯಾಗಿರದೆ ಹುಡಿಹುಡಿಯಾಗಿರುತ್ತವೆ. ಈ ನಿಕ್ಷೇಪಗಳಿಗೆ ಒಗೆಲ್ಲ ಶಿಲಾಗುಂಪು ಎಂದು ಹೆಸರು. ಕೊಲಂಬಿಯಾ ಪ್ರಸ್ಥಭೂಮಿಗೆ ದಕ್ಷಿಣ ಮತ್ತು ಪೂರ್ವದಲ್ಲಿ ಒಂದು ವಿಶಾಲವಾದ ನಿಕ್ಷೇಪ ಪ್ರದೇಶವಿತ್ತು. ಇಲ್ಲಿ ಜ್ವಾಲಾಮುಖಿಜ ಶಿಲೆಗಳೇ ಅಲ್ಲದೆ ಇಲ್ಲಿಯ ಉಪ್ಪುನೀರಿನ ಸರೋವರಗಳ ಇಂಗುವಿಕೆಯಿಂದ ಲವಣ ನಿಕ್ಷೇಪಗಳೂ ಸಂಚಯನಗೊಂಡಿವೆ. ಫೆಸಿಫಿಕ್ ತೀರಪ್ರದೇಶಗಳಾದ ಲಾಸ್‍ಅಂಜಲೀಸ್ ಮತ್ತು ವೆಂಟುರ ಪ್ರದೇಶಗಳಲ್ಲಿ ಸಾಗರ ನಿಕ್ಷೇಪಗಳ ಸಂಚಯನ ಮುಂದುವರಿಯಿತು. ಆದರೆ ಸ್ಯಾನ್‍ಜುವ ಪ್ರದೇಶದಲ್ಲಿ ಪ್ಲಿಯೊಸೀನ್ ಅಂತ್ಯಕಾಲದಲ್ಲಿ ಸಾಗರ ನಿಕ್ಷೇಪಗಳ ಮೇಲೆ ಭೂ ನಿಕ್ಷೇಪಗಳು ಸಂಚಯನಗೊಂಡಿವೆ. ಅಟ್ಲಾಂಟಿಕ್ ತೀರಪ್ರದೇಶಗಳಲ್ಲಿ ಸಾಗರ ನಿಕ್ಷೇಪಗಳು ಮತ್ತು ಭೂ ನಿಕ್ಷೇಪಗಳು ಪರಸ್ಪರ ಹೆಣೆದುಕೊಂಡಿವೆ. ಈ ನಿಕ್ಷೇಪಗಳು 60 ಮೀಟರುಗಳಷ್ಟು ದಪ್ಪವಿದ್ದು ಅಲ್ಲಲ್ಲಿ ಹೇರಳವಾದ ಜೀವ್ಯವಶೇಷಗಳನ್ನು ಹೊಂದಿವೆ. ಲೌಸಿಯಾನ ಕೊಲ್ಲಿ ಪ್ರದೇಶ ಮತ್ತು ಟೆಕ್ಸಾಸಿನ ವಾಯವ್ಯ ಭಾಗದಲ್ಲಿ ಇರುವ ತೈಲಾಶಯಗಳು ಮಿಯೊಸೀನ್‍ಸೋಮ ಮತ್ತು ಪ್ಲಿಯೊಸೀನ್‍ಸ್ತೋಮದ ಕೆಳಭಾಗದಲ್ಲಿ ಇರುವವಾಗಿವೆ.
	ಇಂಡಿಯ : ಶಿವಾಲಿಕ್ ಸಮುದಾಯದ ಮಧ್ಯ ಮತ್ತು ಮೇಲ್ಭಾಗಗಳು ಪ್ಲಿಯೊಸೀನ್ ಕಾಲಕ್ಕೆ ಸೇರಿದವು.

	ಪ್ಲಿಯೊಸೀನ್ ಯುಗದ ಸ್ತನಿಗಳು : ಆನೆ, ಕುದುರೆ, ಎತ್ತು ಮತ್ತು ದೊಡ್ಡ ಜಿಂಕೆಗಳ ಉದಯದಿಂದ ಪ್ಲಿಯೊಸೀನ್ ಯುಗದ ವೈಶಿಷ್ಟ್ಯ ಹಾಗಿದ್ದರೂ ಹಿಪ್ಪೇರಿಯಾನ್ ಮತ್ತು ಪ್ಲಿಯೊಹಿಪ್ಪಸ್ ಕುದುರೆಗಳೇ ಈ ಕಾಲದ ಮರ್ಕಿಹಿಪ್ಪಸಿಗಿಂತ ಹೆಚ್ಚು ಪ್ರಮುಖ ಸ್ತನಿಗಳು. ಇವೆರಡು ಜಾತಿಯ ಕುದುರೆಗಳೂ ತಲೆಬುರುಡೆ ಮತ್ತು ಹಲ್ಲುಗಳ ವಿಕಾಸದಲ್ಲಿ ಮರ್ಕಿಹಿಪ್ಪಸಿಗಿಂತ ಹೆಚ್ಚು ಪ್ರಗತಿ ಹೊಂದಿದ್ದುವು. ಹಿಪ್ಪೀರಿಯಾನಿಗೆ ಮೂರು ಗೊರಸುಗಳಿದ್ದವು. ಪ್ಲಿಯೊಹಿಪ್ಪಸ್ ಈ ದೆಸೆಯಲ್ಲಿಯೂ ಪ್ರಗತಿ ಸಾಧಿಸಿ ಒಂದೇ ಗೊರಸಿನ ಕುದುರೆಯಾಗಿತ್ತು. ಪಕ್ಕದ ಎರಡು ಗೊರಸುಗಳು ಬಲು ಚಿಕ್ಕವಾಗಿದ್ದು, ಹುದುಗಿಕೊಂಡು ಅಗೋಚರವಾಗಿದ್ದುವು. ಖಡ್ಗಮೃಗ ಮತ್ತು ಒಂಟೆಗಳ ಹೇರಳತನ ಮುಂದುವರಿದಿತ್ತು. ಓರಿಯೊಡಾನುಗಳು ಪ್ಲಿಯೊಸೀನ್ ಯುಗ ಅಂತ್ಯಗೊಳ್ಳುವ ಮೊದಲೇ ಗತವಂಶಿಗಳಾದುವು. ದನ, ಕುರಿ, ಮೇಕೆ, ಸಾರಂಗ, ಕಾಡೆಮ್ಮೆ ಮೊದಲಾದವನ್ನು ಒಳಗೊಂಡ ಬೋವಿಡೆ ಸ್ತನಿಗಳು ಮಿಯೊಸೀನ್ ಅಂತ್ಯಕಾಲದಲ್ಲಿ ಉದಯಿಸಿದರೂ ಬಲುಬೇಗನೆ ವೃದ್ಧಿಹೊಂದಿ ವಿವಿಧ ಜಾತಿಗಳಾಗಿ ವರ್ಗೀಕರಣಗೊಂಡವು. ತೋಳಗಳು, ಕಚ್ಚುವ ಬೆಕ್ಕುಗಳು, ಈ ಕಾಲದ ಮುಖ್ಯ ಮಾಂಸಾಹಾರಿಗಳು.
       (ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ